ಪಾಶುಪತಾಸ್ತ್ರ
ಶಿವನ ಬಹುನಾಮಗಳಲ್ಲಿ ಒಂದಾದ ಪಶುಪತಿಯ ಅನುಗ್ರಹದಿಂದ ಬಂದ ಅಸ್ತ್ರ. ಶೂರಪದ್ಮಾಸುರನನ್ನು ಜಯಿಸಲು ಕಾರ್ತಿಕೇಯ ಶಿವನಿಂದ ಈ ಅಸ್ತ್ರವನ್ನು ಪಡೆದ. ಶಿವನ ಕೈಯೊಳಗಿನ ತ್ರಿಶೂಲವೇ ಇದಾಗಿದ್ದು ಜ್ವಾಲಾ ಸ್ವರೂಪದ್ದಾಗಿದೆ. ಸಮಸ್ತ ವಿಶ್ವವನ್ನೂ ನಾಶಮಾಡಬಲ್ಲ ಸಾಮಥ್ರ್ಯ ಇದಕ್ಕಿದೆ. ಅನುಶಾಸನ ಪರ್ವದಲ್ಲಿ ವರ್ಣಿತವಾಗಿರುವಂತೆ ಇದು ಅತ್ಯಂತ ಭಯಂಕರವಾದ ದಿವ್ಯಾಸ್ತ್ರ. ಇದರ ತೇಜಸ್ಸು ಸೂರ್ಯನಂತೆ ಅಥವಾ ಪ್ರಲಯಾಗ್ನಿಯಂತೆ ಇದೆ. ಇದರ ರೂಪ ಸರ್ಪದಂತಿದ್ದು, ಇದಕ್ಕೆ ಸಾವಿರ ಮುಖ, ಸಾವಿರ ಕಣ್ಣು, ಸಾವಿರ ನಾಲಿಗೆ ಹಾಗೂ ಅಸಂಖ್ಯ ಹಲ್ಲು ಇವೆ. ಇದರ ಮುಖದಿಂದ ನಿರಂತರ ಅಗ್ನಿವರ್ಷ ಆಗುತ್ತಲೇ ಇರುತ್ತದೆ. ಬ್ರಾಹ್ಮ್ಯ, ನಾರಾಯಣೇಯ, ಐಂದ್ರ, ವಾರುಣ, ಆಗ್ನೇಯ ಈ ಅಸ್ತ್ರಗಳಿಗಿಂತ ಇದು ಅಧಿಕ ಶಕ್ತಿಶಾಲಿ. ಇದರ ಪ್ರಯೋಗದಿಂದಲೇ ಶಿವ ತ್ರಿಪುರಾಸುರನನ್ನು ಭಸ್ಮ ಮಾಡಿದ.

ಪಾಂಡವರು ವನವಾಸದಲ್ಲಿದ್ದಾಗ ಮುಂದಿನ ಕುರುಕ್ಷೇತ್ರದಲ್ಲಿ ಅತಿರಥ ಮಹಾರಥರನ್ನು ಗೆಲ್ಲುವುದಕ್ಕಾಗಿ ಧsರ್ಮರಾಯನ ಆದೇಶದ ಮೇರೆಗೆ ಅರ್ಜುನ ಇಂದ್ರಕೀಲ ಪರ್ವತಕ್ಕೆ ಹೋಗಿ ಶಿವನನ್ನು ಕುರಿತು ತಪಸ್ಸು ಮಾಡಿ, ಶಬರ ವೇಷದ ಶಂಕರನೊಡನೆ ತನ್ನ ಬಲವನ್ನು ಪ್ರದರ್ಶಿಸಿ ಅವನಿಂದ ಈ ಮಹಾಸ್ತ್ರವನ್ನು ಪಾರ್ವತಿಯಿಂದ ಅಂಜನಾಸ್ತ್ರವನ್ನು ಪಡೆದ. ಮುಂದೆ ಈತ ನಿವಾತಕವಚರೆಂಬ ರಾಕ್ಷಸರನ್ನು ಕೊಂದು ಸ್ವರ್ಗಕ್ಕೆ ಹೋಗುತ್ತಿರುವಾಗ ಆಕಾಶಸಂಚಾರವುಳ್ಳ ಹಿರ್ಯಣಪುರವನ್ನು ಕಂಡು ಅಲ್ಲಿಯ ರಕ್ಕಸರಾದ ಪಾಲೋಮ, ಕಾಲಕಂಜರನ್ನು ಕೆಣಕಿ ದೇವತೆಗಳಿಗೆ ಅವಧ್ಯರಾದ ಮಾಯಾವಿ ದೈತ್ಯರನ್ನು ಈ ಅಸ್ತ್ರದಿಂದ ಸಂಹರಿಸಿದ. ಸೈಂದವ ಸತ್ತುದೂ ಈ ಅಸ್ತ್ರದಿಂದಲೇ.											   (ಕೆ.ವೈ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ